ಶ್ರೀ ಸಪ್ತಮಾತೃಕಾ ಚೌಡೇಶ್ವರೀ ದೇವಸ್ಥಾನವು ಬಹಳ ಪುರಾತನವಾದುದು. ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟಿದ್ದು ಎಂದು ತಿಳಿದುಬಂದಿದೆ. ಈ ದೇವಸ್ಥಾನದ ಬಗ್ಗೆ ಭಾರತೀಯ ಪುರಾತತ್ತ್ವ ಇಲಾಖೆಯಲ್ಲಾಗಲೀ ಅಥವಾ ಕರ್ನಾಟಕ ಸರಕಾರದ ಇಲಾಖೆಗಳಲ್ಲಾಗಲೀ ಯಾವುದೇ ದಾಖಲೆಗಳಿರುವುದಿಲ್ಲ. ಅಥವಾ ಪೂರ್ವಜರಿಂದ ಸ್ಥಾಪಿಸಲ್ಪಟ್ಟ ಬಗ್ಗೆ ವಿವರ ತಿಳಿಯದು.

   ಈ ದೇವಸ್ಥಾನವು 10X20” ಅಳತೆಯ ಕಲ್ಲು ಮಂಟಪದ ದೇವಸ್ಥಾನವಾಗಿದ್ದು ಮುಂಬಾಗಿಲು ಹೊರತುಪಡಿಸಿ ಯಾವುದೇ ಕಿಟಕಿ ಇತ್ಯಾದಿ ಇಲ್ಲದೆ ಇತ್ತು. ಇಲ್ಲಿ ಸಪ್ತಮಾತೃಕೆಯರು ಅಂದರೆ ಬ್ರಾಹ್ಮೀ, ಮಾಹೇಶ್ವರೀ, ಕೌಮಾರೀ, ವೈಷ್ಣವೀ, ವಾರಾಹೀ, ಇಂದ್ರಾಣೀ, ಚಾಮುಂಡಾ (ಚೌಡೇಶ್ವರೀ) ವಿಗ್ರಹಗಳಿದ್ದು 1X1 ½” ಅಳತೆಯಿಂದ ಕೂಡಿದ್ದುದಾಗಿದೆ. ದೇವಿಯರ ಬಲಗಡೆ ಶ್ರೀ ಮಹಾಗಣಪತಿ, ಎಡಗಡೆ ಶ್ರೀ ಕಾಲಭೈರವ ಮೂರ್ತಿಗಳಿರುತ್ತದೆ. ವಿಶೇಷವಾಗಿ ಒಂದು ಕಲ್ಲು ಎರಡು ಸೀಳು ಬಿಟ್ಟಿದ್ದು ಸುಖ-ದುಃಖ ಮ್ಮ ದೇವತೆ ಎಂದು ಕರೆಯಲ್ಪಡುತ್ತಿದ್ದು ಶ್ರೀ ಚೌಡೇಶ್ವರೀ ದೇವಿಯ ಪಕ್ಕದಲ್ಲಿರುತ್ತದೆ.

  ಹಿಂದೆ ಈ ದೇವಸ್ಥಾನವು ಕಲ್ಲು ಮಂಟಪದಿಂದ ಕೂಡಿತ್ತು. ನಮ್ಮ ಪೂರ್ವಜರಾದ ಕೆಂಪನಪುರದ ವಾಸಿ ಶ್ರೀ ಕೃಷ್ಣಪ್ಪನವರು, ಚಾಮರಾಜನಗರ ತಾಲ್ಲೂಕು ಇವರು ಪೂಜಾ ಕಾರ್ಯ ನಡೆಸಿಕೊಂಡು ಬರುತ್ತಿದ್ದರು. ಪ್ರತಿ ವರ್ಷ ಫಾಲ್ಗುಣ ಚೈತ್ರ ಮಾಸದಲ್ಲಿ ಕಾಡೂರಮ್ಮ ವ್ರತ ಎಂದು ಆಚರಿಸುತ್ತಿದ್ದು. ಈ ಹಿಂದೆ ಮನೆದೇವರ ವಂಶಸ್ಥರು ಮಾತ್ರ ಸುಮಾರು 40 – 50 ಜನರು ಬರುತ್ತಿದ್ದರು. 1985ರ ವರ್ಷದ ವಾರ್ಷಿಕ ಜಾತ್ರೆಯಲ್ಲಿ ನೆರೆದಿದ್ದ ಮನೆದೇವರ ವಂಶಸ್ಥರು ಅದರಲ್ಲಿ ಮುಖ್ಯವಾಗಿ ದಿ. ಕೆ. ವರದರಾಜುರವರು ಈ ದೇವಸ್ಥಾನದ ಜೀಣೋದ್ಧಾರ ಕಾರ್ಯ ಕೈಗೊಳ್ಳುವ ಬಗ್ಗೆ ಪ್ರಸ್ತಾಪ ಸಲ್ಲಿಸಿದರು. ಅದಕ್ಕೆ ಎಲ್ಲರೂ ಸಮ್ಮ ತಿಸಿದರು. ಅಂದು ಹಾಜರಾಗಿದ್ದ ವೇ. ಬ್ರ. ಶ್ರೀ ದಿ. ಸುಬ್ಬಾವಧಾನಿಗಳವರೂ ಸಹ ಒಮ್ಮತ ಸೂಚಿಸಿ, ನೆರೆದಿದ್ದ ಭಕ್ತಾದಿಗಳ ಸಮ್ಮುಖದಲ್ಲಿ ಗುದ್ಧಲಿ ಪೂಜಾ ಕಾರ್ಯ ನೆರವೇರಿಸಿದರು. ಹಾಗೂ ವೇದಪುರಸ್ಸರವಾಗಿ ಜೀರ್ಣೋದ್ಧಾರ ಕಾರ್ಯದಲ್ಲಿ ನೆರವು ನೀಡುವುದಾಗಿ ಸಮ್ಮತಿಸಿದರು.

  ಅದರಂತೆ, 1986ನೇ ವರ್ಷದಲ್ಲಿ ವೇದಪುರ ಸ್ಸರವಾಗಿ ಪೂಜಾ ಕಾರ್ಯಕೈಗೊಂಡು ದೇವಿಯರಲ್ಲಿದ್ದ ಶಕ್ತಿಯನ್ನು ಕಲಾಕರ್ಷಣೆ ಮಾಡಿಕೊಂಡು ಕಲಾಕರ್ಷಿತ ಕಳಸಗಳನ್ನು ಶೃಂಗೇರೀ ಸ್ಥಾಪಿತ ಚಾಮರಾಜನಗರ ತಾಲೂಕು ಹೆಬ್ಬಸೂರಿನ ಶೃಂಗೇರೀ ಮಠದಲ್ಲಿಟ್ಟು ಪ್ರತಿ ನಿತ್ಯ ಪೂಜೆ ನಡೆಯುವ ಏರ್ಪಾಡು ಮಾಡಲಾಯ್ತು. ನಂತರ ಪ್ರತಿಷ್ಠಾಪಿತ ದೇವೀ ವಿಗ್ರಹಗಳಿಗೆ ಯಾವುದೇ ಚ್ಯುತಿ ಬಾರದಂತೆ ಮರದ ಹೊಟ್ಟು, ಭತ್ತದ ಹೊಟ್ಟು ತುಂಬಿ, ನಂತರ ಮರಳನ್ನು ತುಂಬಿ, ಸನ್ನೆ ಮುಖೇನ ಕಲ್ಲು ಮಂಟಪದ ಕಲ್ಲುಗಳನ್ನು ತೆಗೆಯಲಾಯಿತು. ಈ ಕಾರ್ಯವು ಮುಕ್ತಾಯ ಗೊಂಡ ನಂತರ 24X40” ಅಳತೆಯ ತಾರಸಿಯಿಂದ ಕೂಡಿದ ನಿರ್ಮಾಣ ಮಾಡಿ, ಅದರಲ್ಲಿಯೇ 18X6” ಅಳತೆಯ ಗರ್ಭಗುಡಿ ನಿರ್ಮಾಣ ಮಾಡಲಾಯಿತು. 1987ರ ಮಾರ್ಚ್ ಮಾಹೆ ಯ ವಾರ್ಷಿಕ ಜಾತ್ರೆಯಲ್ಲಿ ಶೃಂಗೇರೀ ಮಠದಲ್ಲಿಡ ಲಾಗಿದ್ದ ಕಲಾಕರ್ಷಿತ ಕಳಶಗಳನ್ನು ಪುನಃ ದೇವಸ್ಥಾನಕ್ಕೆ ತಂದು ವೇದೋಕ್ತವಾಗಿ ಪುನಃ ಪ್ರತಿಷ್ಠಾಪನಾ ಕಾರ್ಯುಮುಖೇನ ದೇವೀ ಶಕ್ತಿಯನ್ನು ವಿಗ್ರಹಗಳಿಗೆ ನೀಡಲಾಯಿತು. ಅಂದು ಸುಮಾರು 200-250ಜನರು ಸೇರಿದ್ದು, ವಾರ್ಷಿಕ ಜಾತ್ರೆ ಮುಕ್ತಾಯಗೊಂಡಿತು.

  ನಂತರ ಜೀರ್ಣೋದ್ಧಾರ ಕಾರ್ಯಕೈಗೊಂಡು ದೇವಿಯರಿಗೆ ನಿತ್ಯಪೂಜೆ ನಡೆಸುವ ಏರ್ಪಾಡು ಮಾಡಲಾಯಿತು. ದೇವಿಯ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವಂತೆ ಮಾಡಲು ಪ್ರತಿ ತಿಂಗಳ ಎರಡನೆಯ ಭಾನುವಾರದಂದು ವಿಶೇಷ ಪೂಜೆ ನಡೆಯುವ ಏರ್ಪಾಡು ಮಾಡಲಾಯಿತು. ಅಂದು ಪುಣ್ಯಾಹ, ನವಗ್ರಹ ಪೂಜೆ, ವಾಸ್ತು ಪೂಜೆ, ಮಹಾಗಣಪತಿ ಪೂಜೆ, ನಂತರ ಮೂಲಮೂರ್ತಿಯವರಿಗೆ ಅಭಿಷೇಕ, ನಂತರ ನವಗ್ರಹ ಹೋಮ, ಮಹಾಗಣಪತಿ ಹೋಮ, ದುರ್ಗಾಹೋಮ ಮತ್ತು ಮೃತ್ಯುಂಜಯ ಹೋಮ ಕಾರ್ಯ ನಡೆಸಿ ಬಂದ ಭಕ್ತಾದಿಗಳಿಗೆ ಅನ್ನದಾನ ನಡೆಸುವ ಏರ್ಪಾಡು ಮಾಡಲಾಯಿತು.

  1988ನೇ ವರ್ಷದಲ್ಲಿ ದೇವಸ್ಥಾನದ ಗರ್ಭಗುಡಿಯ ಮೇಲೆ ವಿಮಾನ ಗೋಪುರ ನಿರ್ಮಾಣ ಮಾಡಿಸಿ. ಕುಂಭಾಭಿಷೇಕ ನಡೆಸಲಾಯಿತು. 1989ರಲ್ಲಿ ಚೌಡೇಶ್ವರೀ ದೇವಿಯ ಉತ್ಸವಮೂರ್ತಿಯನ್ನು ಪಂಚಲೋಹದಲ್ಲಿ ಕುಂಭಕೋಣದಲ್ಲಿ ಮಾಡಿಸಿ, ದೇವಸ್ಥಾನಕ್ಕೆ ತರಲಾಯಿತು. ಅಲ್ಲದೆ ಒಂದು ಸಣ್ಣ ಚೌಡೇಶ್ವರೀ ದೇವಿಯ ವಿಗ್ರಹವನ್ನು ಪಂಚಲೋಹದಲ್ಲಿ ಮಾಡಿಸಿ, ಮಾಸಿಕ ವಿಶೇಷ ಪೂಜೆಯಂದು ಉತ್ಸವ ನಡೆಸುವ ಏರ್ಪಾಡು ಮಾಡಲಾಯಿತು. ಅಂತೆಯೇ ಪ್ರತಿ ವರ್ಷದ ವಾರ್ಷಿಕ ಜಾತ್ರೆಯಲ್ಲಿ ಒಂದೊಂದು ಮಹತ್ತರ ಹೋಮಗಳು ಅಂದರೆ ನವಚಂಡಿ, ಶತಚಂಡಿ, ಕುಬೇರಲಕ್ಷ್ಮೀ, ಕೋಟಿನಾಮಯಜ್ಞ, ಕಮಲ ಪುಷ್ಪ ಹೋಮ, ಲಲಿತಾಸಹಸ್ರನಾಮ ಹೋಮ ಇತ್ಯಾದಿಗಳನ್ನು ನಡೆಸಿಕೊಂಡು ಬಂದಿರುತ್ತದೆ. ಚೌಡೇಶ್ವರೀ ವ್ರತ ಹಾಗೂ ಕಾಡೂರಮ್ಮ ಹಬ್ಬ ಎಂದು ಕರೆಯಲ್ಪಡುತ್ತಿದ್ದುದನ್ನು ಪರಿವರ್ತಿಸಲು ಎರಡು ಮರದ ರಥಗಳನ್ನು ನಿರ್ಮಾಣಮಾಡಲಾಯಿತು. ಅಂದಿನಿಂದ ಶ್ರೀ ಸಪ್ತಮಾತೃಕಾ ಚೌಡೇಶ್ವರೀ ರಥೋತ್ಸವ ಎಂದು ಕರೆಯಲ್ಪಡುತ್ತಿದ್ದು ಮೇಲೆ ತಿಳಿಸಿದಂತೆ ಪಾಲ್ಗುಣ ಚೈತ್ರ ಮಾಸದಲ್ಲಿ ನಡೆಸಿಕೊಂಡು ಬರುತ್ತಲಿದೆ. ಹಾಗೂ ಇದರ ನಿರ್ವಹಣೆ ಕಾರ್ಯಕ್ಕೆ 15 ಸದಸ್ಯರುಳ್ಳ ಟ್ರಸ್ಟ್ ಸ್ಥಾಪಿಸಲಾಯಿತು.

  ಈ ದೇವಸ್ಥಾನದ ಪೂಜಾ ಕಾರ್ಯ ಹಾಗೂ ವಿಶೇಷ ಪೂಜೆಯಂದು ನಡೆಯುವ ಕಾರ್ಯಕ್ಕೆ ಅನೇಕ ಭಕ್ತಾದಿಗಳು ಬರುತ್ತಿದ್ದು, ದೇವೀ ಶಕ್ತಿಯಿಂದ ಉತ್ತಮ ಪ್ರತಿಕ್ರಿಯೆ ಭಕ್ತಾದಿಗಳಿಗೆ ಉಂಟಾದ ಕಾರಣ ಭಕ್ತಾದಿಗಳ ಸಂಖ್ಯೆಯು ದಿನೇ ದಿನೇ ವೃದ್ಧಿಗೊಳ್ಳುತ್ತಲಿದೆ. ಈ ದೇವಸ್ಥಾನಕ್ಕೆ ಹಿಂದಿನ ಶೃಂಗೇರೀ ಸ್ವಾಮಿಗಳವರೂ ಹಾಗೂ ಇಂದಿನ ಸ್ವಾಮಿಗಳವರೂ ಭೇಟಿ ನೀಡಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿರುತ್ತಾರೆ. ಕೋಟಿನಾಮ ಯಜ್ಞದಲ್ಲಿ (15) ಮೇರು (ಶ್ರೀಚಕ್ರ)ಗಳನ್ನು ನೀಡಿದ್ದು, ಪೂಜಾ ಕಾರ್ಯದ ನಂತರ ಶೃಂಗೇರಿ ಮಠಕ್ಕೆ ಹಿಂದಿರುಗಿಸುವ ಸಮಯದಲ್ಲಿ ಈ ದೇವಸ್ಥಾನವು ಮುಂದೆ ಒಳ್ಳೆಯ ಪ್ರವರ್ಧಮಾನಕ್ಕೆ ಬಂದು ಪುಣ್ಯಕ್ಷೇತ್ರ ವಾಗುವುದೆಂದು ಸ್ವಾಮಿಗಳವರು ಆಶೀರ್ವದಿಸಿ ಒಂದು ಶ್ರೀಚಕ್ರವನ್ನು ನೀಡಿರುತ್ತಾರೆ.

  ಹೀಗೆ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಲಿದ್ದು ಭಕ್ತರಿಗೆ ಅನ್ನದಾನ ನಡೆಸಲು ಒಂದು ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ. ಈ ಭವನದಲ್ಲಿ ಶುಭ ಕಾರ್ಯಗಳು ಜರುಗಲು ಉಚಿತವಾಗಿ ಅತಿ ಕಡಿಮೆ ದರದಲ್ಲಿ ನೀಡಲಾಗುತ್ತಿದೆ. ಇಲ್ಲಿಯ ಸುತ್ತಮುತ್ತಲಿನ ಜಿಲ್ಲೆಗಳಾದ ಮೈಸೂರು, ಮಂಡ್ಯದ ಹಳ್ಳಿಗರಿಗೆ ಈ ಸಮುದಾಯ ಭವನದಿಂದ ಬಹಳ ಅನುಕೂಲವಾಗಿರುತ್ತದೆ. ಪ್ರತಿನಿತ್ಯ ಅನ್ನದಾನ ನಡೆಯುವ ಏರ್ಪಾಡು ಮಾಡಲಾಗಿದೆ. ಚಾಮರಾಜ ನಗರದ ಗಣೇಶ ಬಸ್ ಮಾಲೀಕರಾದ ದಿವಂಗತ ನಾಗೇಶರಾಯರು ಈ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿಗಳಲ್ಲಿ ಒಬ್ಬರಾಗಿ ದೇವಸ್ಥಾನದ ಸರ್ವತೋಮುಖ ಅಭಿವೃದ್ಧಿಗೆ ಬಹುವಾಗಿ ಶ್ರಮಿಸಿದ್ಧಾರೆ. ಪ್ರತಿ ತಿಂಗಳ ವಿಶೇಷ ಪೂಜೆಯಂದು ಸುಮಾರು 700 – 800 ಭಕ್ತಾದಿಗಳು ಬರುತ್ತಿದ್ದು ಎಲ್ಲರಿಗೂ ಉಚಿತವಾಗಿ ಉಪಹಾರ, ಹಾಗೂ ಮಧ್ಯಾಹ್ನದ ಅನ್ನಸಂರ್ತಪಣೆಯನ್ನು ಏರ್ಪಾಡುಮಾಡಲಾಗಿದೆ. ಈ ಏರ್ಪಾಡಿಗೆ ಹೆಚ್ಚಿನ ಹಣದ ಅವಶ್ಯಕತೆ ಇದ್ದು, ದೇವಸ್ಥಾನದಿಂದ ಬರುವ ಆದಾಯ (ಉತ್ಪತ್ತಿ)ಕ್ಕಿಂತ ಖರ್ಚು ಅಧಿಕವಾಗುತ್ತಿರುವುದರಿಂದ ನೊಂದಾಯಿತ ಧರ್ಮಧರ್ಶಿಗಳು ಸ್ವಯಂ ಖರ್ಚಿನಿಂದ ಊಟದ ವ್ಯವಸ್ಥೆ ನಡೆಸಿ ಕೊಂಡು ಬರುತ್ತಲಿದೆ.