ಕರ್ಣಾಟಕವು ತಪೋ ಮಹಿಮೆಗೆ ತವರೂರಾಗಿ, ಜ್ಞಾನಿಗಳಿಗೆ ಸುಕ್ಷೇತ್ರವಾಗಿ ಯೋಗಿಗಳಿಗೆ ಯೋಗಮಂದಿರವಾಗಿ, ಆಚಾರ್ಯರಿಗೆ ಮೂಲಪೀಠವಾಗಿ, ಸತ್ಯ ಧರ್ಮ, ತ್ಯಾಗಗಳಿಗೆ ನಿಧಿ ಕಣಜವಾಗಿ, ಸಂಗೀತ, ಸಾಹಿತ್ಯಾದಿಗಳಿಗೆ ರತ್ನಾಕರವಾಗಿ, ಶಿಲ್ಪಕಲೆಗೆ ಕಲ್ಪತರುವಾಗಿರುವುದು ಕನ್ನಡಿಗರೆಲ್ಲರ ಭಾಗ್ಯ. ಇಂತಹ ಪುಣ್ಯ ಭೂಮಿಯಲ್ಲಿ ಶಕ್ಕಿದೇವೆಯ ಆರಾಧನೆಯ ಅನಾದಿ ಕಾಲದಿಂದಲೂ ಅವಿಚ್ಛಿನ್ನವಾಗಿ ನಡೆದುಬಂದಿದೆ. ಮಾನವ ತನ್ನ ಇತಿಮಿತಿಗಳನ್ನು ಅರಿತಾಗ ತನಗಿಂತ ಅದ್ವೀತಿಯವಾದ ದಿವ್ಯ ಶಕ್ತಿಯೊಂದನ್ನು ಮನಗಂಡ, ಅದನ್ನೇ ಪ್ರಕೃತಿ ಮಾತೆ ಎಂದು ತನ್ನ ಜನನಿಯಂತೆ ಗೌರವಿಸಿ ಶ್ರದ್ಧಾಭಕ್ತಿಗಳಿಂದ ಪೂಜಿಸತೊಡಗಿದ. ಬಡವ ಬಲ್ಲಿದರೆಂಬ ಭಾವನೆಯನ್ನು ತೊರೆದು ಗ್ರಾಮದೇವತೆಯಾಗಿ, ನಾಡದೇವತೆಯಾಗಿ, ರಾಷ್ಟ್ರದೇವತೆಯಾಗಿ ಅವಳನ್ನು ಪರಿಭಾವಿಸಿದ. ಆಕೆ ಕಾಲ ದೇಶ ಜಾತಿ ನುಡಿಗಳನ್ನು ಮೀರಿ ಜನಮನದಲ್ಲಿ ಪರಮಶಕ್ತಿಯಾಗಿ ಬೆಳೆದಳು. ಪ್ರಾರಂಭದಲ್ಲಿ ಮೃನ್ಮಯ ರೂಪಳಾಗಿ, ದಾರುಸ ಲೋರು, ಶಿಲಾಮಯಳಾಗಿ ಅಂತರಂಗದಿಂದ ಬಹಿರಂಗಕ್ಕೂ ನಿರಾಕಾರದಿಂದ ಸಾಕಾರಕ್ಕೂ ಮೂರ್ತಿಕರಿಸಲ್ಪಟ್ಟಳು. ಹೀಗೆ ಈ ಆದಿ ಶಕ್ತಿಯ ಸೃಷ್ಟಿ, ಸ್ಥಿತಿ, ಲಯ ಅನುಗ್ರಹ, ತಿರೋಧಾನಗಳಿಂದ ಭಕ್ತತಜನರ ಧರ್ಮದೇವತೆಯಾಗಿ ರೂಪುಗೊಂಡು ಏಕತೆಯಿಂದ ಬಹುರೂಪಳಾಗಿ ಸಪ್ತಮಾತೃಕೆಯಾಗಿ ಪೂಜಿಸಲ್ಪಟ್ಟಳು. ಈಕೆ ಲೋಕಕಲ್ಯಾಣಾರ್ಥವಾಗಿ ಭಕ್ತಜನರ ಇಷ್ಟಾರ್ಥ ಪ್ರದಾಯಿನಿಯಾಗಿ ಮಹಾಮಂಗಳ ಸ್ವರೂಪಿಣಿಯಾದಳು. ಇಂತಹ ಅಪರಿಮಿತ ಶಕ್ತಿಯು ಆಯಾ ಪ್ರದೇಶದ, ಆಯಾ ಭಾಷೆಯ, ಆಯಾ ಧರ್ಮದ, ಅಂತರಂಗ ಅನುಭವದ, ಅನುಭಾವದಿಂದ ಜನಮನದಲ್ಲಿ ಉದ್ಬವಿಸಿ ಸಪ್ತಮಾತೃಕೆಯರ ರೂಪದಲ್ಲಿ ಇಲ್ಲಿ ಕಂಗೊಳಿಸುತ್ತಿರುವಳು.

ಈ ದೇವಾಲಯದ ವೈಶಿಷ್ಟ್ಯಗಳು

  ಪ್ರಪ್ರಥಮವಾಗಿ ಸಪ್ತಮಾತೃಕೆಯರಿಗೇ ಮೈಸೂರಿನಲ್ಲಿ ದೇವಾಲಯವನ್ನು ನಿರ್ಮಿಸಿರುವುದು ಅದ್ವೀತಿಯವಾಗಿದೆ. ಈ ದೇವಾಲಯವು ಮೈಸೂರು ಕೇಂದ್ರಕ್ಕೆ ವಾಯುವ್ಯ ದಿಕ್ಕಿನಲ್ಲಿ ಇದ್ದು ಆಗಮಶಾಸ್ತ್ರಕ್ಕೆ ಅನುಗುಣವಾಗಿದೆ.

  ಸ್ಥಳ ಪ್ರಾಶಸ್ತ್ರ್ಯ : ಈಶಾನ್ಯ ದಿಕ್ ಪ್ಲವ ನೈಋತಿ ಔನ್ನತ್ಯವೂ, ಸುರಭಿಗಂಧಯುಕ್ತವೂ ಆದ ಸುಪದ್ಮಾ ಭೂಲಕ್ಷಣ, ದಿಕ್ ಪರಿಚ್ಛೇದ, ವೃಷಭ ಯೋನಿ, ವಾಸ್ತುಮಂಡಲ, ಆಮಾಯಜಪಾಯ, ಕ್ಷೇತ್ರವೃದ್ಧಿ, ದೇವಾಂಶಾದಿಗಳನ್ನು ಸಾಧಿಸಿ ನಿರ್ಮಿಸಲಾಗಿದೆ. ಅಧಿಷ್ಠಾನವು ಖುರಾದಿ ಷಡ್ಬರ್ಗ ಯುಕ್ತವಾಗಿದೆ.

  ಮೂರ್ತಿ ವೈಶಿಷ್ಟ್ಯ : ಈ ಗರ್ಭಗುಡಿಯ ಸಪ್ತಮಾತೃಕೆಯರನ್ನು ಆಗಮ ಶಾಸ್ತ್ರಕ್ಕೆ ಅನುಗುಣವಾಗಿ ಮೂರ್ತಿ ಶಿರೋವಿನ್ಯಾಸ, ಆಸನ – ಆಯುಧಾದಿಗಳು ಮತ್ತು ವಾಹನಾದಿಗಳನ್ನು ರೂಪಿಸಲಾಗಿದೆ. ಗರ್ಭಗುಡಿಯಲ್ಲಿಯೇ ದೇವಿಯರ ಮುಂಭಾಗದಲ್ಲಿ ಅಖಂಡ ಶಿಲಾ ಚಕ್ರ ಚಿದಂಬರ ಮೇರು ಪ್ರಸ್ತಾರ ವಿನ್ಯಾಸ ಮತ್ತೊಂದು ವಿಶೇಷ. ಅದರ ಮುಂಭಾಗದ ಬಲಭಾಗದಲ್ಲಿ ಶ್ರೀ ಮಹಾಗಣಪತಿಯನ್ನೂ ಹಾಗೂ ಎಡಭಾಗದಲ್ಲಿ ಭೈರವಮೂರ್ತಿಯನ್ನೂ ಹಾಗೂ ಉತ್ತರ ಭಾಗದಲ್ಲಿ ಸುಖದುಃಖದೇವಿಯರನ್ನೂ ಸ್ಥಾಪಿಸಲಾಗಿದೆ.

  ದೇವಿಪಂಚಾಯತನ ವೈಶಿಷ್ಟ್ಯ : ಮುಖ ಮಂಟಪದಲ್ಲಿ ದೇವಿಯರ ಈಶಾನ್ಯದಲ್ಲಿ ದಕ್ಷಿಣಾಭಿಮುಖವಾಗಿ ದಕ್ಷಿಣಾಮೂರ್ತಿ ವಿಗ್ರಹವನ್ನೂ ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣುವೇ ಎಂಬ ಉಕ್ತಿಗೆ ಅನುಗುಣವಾಗಿ ಆಗ್ನೇಯದಲ್ಲಿ ಶ್ರೀ ಸತ್ಯನಾರಾಯಣನನ್ನು ಉತ್ತರಾಭಿಮುಖವಾಗಿಯೂ ನೈಋತ್ಯದಲ್ಲಿ ವಿನಾಯಕನನ್ನೂ ವಾಯವ್ಯದಲ್ಲಿ ಸೂರ್ಯನನ್ನೂ ಸ್ಥಾಪಿಸಲಾಗಿದೆ. ಗರ್ಭಗುಡಿಯ ಲಲಾಟಪಟ್ಟಿಕೆಯಲ್ಲಿ ಶ್ರೀ ಗಜಲಕ್ಷ್ಮೀ ವಿಗ್ರಹ ಮತ್ತು ಘಟಪಲ್ಲವಗಳನ್ನೂ ಮಕರತೋರಣಗಳನ್ನೂ ವಿನ್ಯಾಸಗೊಳಿಸಲಾಗಿದೆ. ಮುಖ ಮಂಟಪದ ಮೇಲ್ಫಾವಣಿಯ ಒಳಭಾಗದಲ್ಲಿ (ವಿತಾನ) ಮೂರು ಕಮಲವಿದ್ದು ಅದನ್ನು ಕ್ಷಿಪ್ತೋಕ್ಷಿಪ್ತ ಕ್ರಮದಲ್ಲಿ ವಿನ್ಯಾಸಗೊಳಿಸಲಾಗಿದೆ. ಕಂಬಗಳ ವೈವಿದ್ಯತ್, ಉತ್ತರ ಪೂರ್ವ ದಕ್ಷಿಣ ದ್ವಾರಗಳೂ, ಪ್ರಧಾನ ದ್ವಾರದ ಎಡಬಲಗಳಲ್ಲಿ ಸಿಂಹಗಳು ಅವುಗಳ ಪಕ್ಕಗಳಲ್ಲಿ ಧಾತೃ ವಿಧಾತೃರೆಂಬ ದ್ವಾರಪಾಲಕರ ವಿನ್ಯಾಸ. ಅವರ ಮುಂಭಾಗದಲ್ಲಿ ಅಖಂಡ ಶಿಲಾ ಧ್ವಜಸ್ಥಂಭ 31 ಅಡಿ ಎತ್ತರದ್ದು ಮತ್ತು ಬಲಿಪೀಠ. ಅದರ ಮುಂದೆ ಮಹಾದ್ವಾರವೂ ವಿನ್ಯಾಸಗೊಂಡು ಇದು ಒಂದು ಧಾರ್ಮಿ, ಸಾಂಸ್ಕೃತಿಕ, ಕಲಾ ಕೇಂದ್ರವಾಗಿದೆ.  ಪ್ರಾಕಾರ ದೇವತೆಗಳ ವೈಶಿಷ್ಟ್ಯ : ಗರ್ಭಗುಡಿಯ ದಕ್ಷಿಣ ಭಿತ್ತಿಯ ಮೇಲ್ಭಾಗದಲ್ಲಿ ಬ್ರಹ್ಮಲೋಕ – ಬ್ರಹ್ಮ, ಸರಸ್ವತೀ, ನಾರದ ಮತ್ತು ತುಂಬುರರು ಅದಕ್ಕೆ ಮುಂಭಾಗದಲ್ಲಿ ತ್ರಿಮೂರ್ತಿ ಸ್ವರೂಪರಾದ ಜಗದ್ಗುರು ಆದಿ ಶಂಕರರು ಹಾಗೂ ಅವರ ನಾಲ್ವರು ಶಿಷ್ಯರ ವಿನ್ಯಾಸ. ಅದರ ತಳಭಾಗದಲ್ಲಿ ನವದುರ್ಗೆಯರ ಆಗಮೋಕ್ತ ವಿನ್ಯಾಸ. ಗರ್ಭಗುಡಿಯ ಪಶ್ಚಿಮ ಭಿತ್ತಿಯಲ್ಲಿ ಕಲ್ಪವೃಕ್ಷ ಕಾಮಧೇನುಗಳ ವಿನ್ಯಾಸ ಎಡಭಾಗದಲ್ಲಿ ಶಿವಲೋಕ ಶಿವ ಪಾರ್ವತೀ, ಕುಮಾರಸ್ವಾಮಿ ಮತ್ತು ಗಣಪತಿಯವರ ವಿನ್ಯಾಸ ಹಾಗೂ ಬಲಭಾಗದಲ್ಲಿ ಕೈಲಾಸದಿಂದ ಗಂಗೆ, ಯುಮನೆಯರ ಉಗಮ, ಪಶು ಪಕ್ಷಿ ಪ್ರಾಣಿಗಳು ತಮ್ಮ ವೈರತ್ವವನ್ನು ಮರೆತು ಅನ್ಯೋನ್ಯ ಜೀವನದ ಸುಂದರ ತಪೋವನ ದೃಶ್ಯ. ತಳಭಾಗದಲ್ಲಿ ಷೋಡಶ ಮಾತೃಕೆಯರ ವಿನ್ಯಾಸ. ಭರತಖಂಡದ ಪ್ರಸಿದ್ಧ ದೇವೀ ದೇವಾಲಯಗಳ ವಿಗ್ರಹಗಳನ್ನು ಇಲ್ಲಿ ಸ್ಥಾಪಿಸಿಲಾಗಿದೆ. ಗರ್ಭಗುಡಿಯ ಉತ್ತರಭಿತ್ತಿಯಲ್ಲಿ ವಿಷ್ಣಲೋಕ ಮಹಾವಿಷ್ಣು ಮತ್ತು ಮಹಾಲಕ್ಷ್ಮೀ, ಆದಿಶೇಷನ ಹೆಡೆಯಲ್ಲಿ ಆಸೀನರಾಗಿರುವರು. ಅವರ ಅಕ್ಕಪಕ್ಕಗಳಲ್ಲಿ ಗರುಡ ಮತ್ತು ವಿಷ್ವಕ್ಸೇನರ ವಿನ್ಯಾಸ. ತಳಭಾಗದಲ್ಲಿ ಅಷ್ಟಲಕ್ಷ್ಮಿಯರ ವಿನ್ಯಾಸ.

  ವಿಮಾನ ವೈಶಿಷ್ಟ್ಯ : ಸಪ್ತಮಾತೃಕೆಯರ ದೇವಾಲಯದಲ್ಲಿ ಅಕಾರದಿಂದ ಕ್ಷಕಾರದವರೆಗೆ ಅಕ್ಷರ ದೇವತೆಯರ ವಿನ್ಯಾಸ ಭಾರತದಲ್ಲೇ ಪ್ರಪ್ರಥಮ. ಒಂದೊಂದು ಅಕ್ಷರ ದೇವತೆಗಳೂ ಆಗಮೋಕ್ತ ಧ್ಯಾನಶ್ಲೋಕದಂತೆ ನಿರ್ಮಾಣ. ವಿಮಾನದ ಮಹಾನಾಸಿಕ ಅಲ್ಪನಾಸಿಕಗಳ ತಳಭಾಗ, ಪೂರ್ವಕ್ಕೆ ಗಣಪತಿ, ದಕ್ಷಿಣಕ್ಕೆ ಸರಸ್ವತೀ, ಪಶ್ಚಿಮಕ್ಕೆ ಶ್ರೀ ಚೌಡೇಶ್ವರೀ ಮತ್ತು ಉತ್ತರಕ್ಕೆ ಮಹಾಲಕ್ಷ್ಮೀ ವಿಗ್ರಹಗಳಿವೆ. ಗಣಪತಿಯ ಅಕ್ಕ ಪಕ್ಕ ಪ್ರಣವಾಕ್ಷರ ದೇವತೆಯರು, ಈಶಾನ್ಯದಲ್ಲಿ ಶ್ರೀ ಮಹಾಕಾಳಿಕಾಂಬಾ ವಿಗ್ರಹ, ಆಗ್ನೇಯದಲ್ಲಿ ಶ್ರೀ ಗಾಯತ್ರೀ ದೇವಿ, ನೈಋತ್ಯದಲ್ಲಿ ಶ್ರೀ ಸಾವಿತ್ರೀ ದೇವೀ, ವಾಯುವ್ಯದಲ್ಲಿ ಶ್ರೀ ಸರಸ್ವತೀದೇವೀ ಹಾಗೂ ಪರಂಪರಾಗತ ವಿಮಾನದ ಇತರ ದೇವಾದಿಗಳ ವಿನ್ಯಾಸ ಮಾಡಲಾಗಿದೆ.


  ಮುಖಮಂಟಪದ ಮೇಲ್ಛಾವಣಿಯ ಮೇಲ್ಭಾಗದಲ್ಲಿ ದೇವಕೋಷ್ಠಗಳು : ಪೂರ್ವಕ್ಕೆ ಗಣಪತಿ ಸಪ್ತಮಾತೃಕೆಯರು ಮತ್ತು ವೀರಭದ್ರ, ದಕ್ಷಿಣಕ್ಕೆ ಪಾರ್ವತಿ, ಪರಮೇಶ್ವರ, ಷಣ್ಮಖ, ನಂದೀಶ್ವರ ಹಾಗೂ ಉತ್ತರಕ್ಕೆ ಲಕ್ಷ್ಮೀನಾರಾಯಣ, ಗರುಡ, ಅಂಜನೇಯರ ವಿನ್ಯಾಸವಿದೆ.

  ಮಂಟಪದ ಮೇಲೆ ನಾಲ್ಕು ಮೂಲೆಗಳಲ್ಲಿ ಕರ್ಣಕೂಟಗಳು ಕೋಟಿ ಭೂತೇತ್ಯಾದಿಗಳನ್ನು ವಿನ್ಯಾಸಗೊಳಿಸಲಾಗಿದೆ. ದೇವಾಲಯದ ಆವರಣದ ಸುತ್ತಲೂ ಛಾದ್ಯವೆಂಬ ಸಜ್ಜಗಳನ್ನು ವಿನ್ಯಾಸ ಮಾಡಲಾಗಿದೆ. ಭೂಮಂಡಲಕ್ಕೆ ದೇವಲೋಕವನ್ನು ದರ್ಶಿಸುವಂತಿದೆ.

  ಈ ದೇವಾಲಯವೆಂಬ ಮಹಾಪ್ರಭಂದವನ್ನು ವಿನ್ಯಾಸಗೊಳಿಸಿ ಜಗಜ್ಜನನಿಯಾದ ಶ್ರೀ ಚಾಮುಂಡೇಶ್ವರೀ ದೇವಿಗೆ ಸಮರ್ಪಿಸುವ ಸಂಕಲ್ಪದಲ್ಲಿ ಅಭಿಯಂತರರಾಗಿ ಹಾಗೂ ಸಮಸ್ತ ಕಾರ್ಯನಿರ್ವಾಹಕರಾಗಿ ಶ್ರೀವತ್ಸ ಗೋತ್ರಜರು ಆಶ್ವಲಾಯನ ಸೂತ್ರಜರೂ ಋಕ್ ಶಾಖಾಧ್ಯಾಯಿಗಳು ಮೈಸೂರಿನವರೇ ಆದ ಶ್ರೀ ಸುಬ್ಬರಾವ್ ಕಲ್ಲೇಶ್ ಭಾಸ್ಕರ್ ( ಎಸ್. ಕೆ. ಭಾಸ್ಕರ್) ಮತ್ತು ಎಂ. ವಿ. ರಾಮಪ್ರಸಾದ್ ರವರು ಶ್ರದ್ಧಾಭಕ್ತಿಗಳಿಂದ ಕಾರ್ಯನಿರ್ವಹಿಸಿರುತ್ತಾರೆ. ದೇವಾಲಯವನ್ನು ಶಿಲ್ಪಾಶಾಸ್ತ್ರೋಕ್ತವಾಗಿ ಸಂಯೋಜಿಸಿ ಹಾಗೂ ವಿನ್ಯಾಸಗೊಳಿಸಿದ ಸ್ಥಪತಿಗಳು ಕಶ್ಯಪ ಗೋತ್ರಜರೂ ಕಾತ್ಯಾಯನ ಸೂತ್ರಜರೂ ಯಜುಶ್ವಾಖಾಧ್ಯಾಯಿಗಳು ಶಾಸನ ಶಾಸ್ತ್ರಜ್ಞರೂ ಆದ ಪ್ರಾಧ್ಯಾಪಕ ವೇ|| ಬ್ರ|| ಶ್ರೀ ಎನ್ . ನಂಜಂಡಸ್ವಾಮಿ, ಭಾರತೀಯ ಪುರಾತತ್ವ ಸರ್ವೇಕ್ಷಣ ಮೈಸೂರು ರವರು ಯಶಸ್ವಿಯಾಗಿ ಕಾರ್ಯನಿರ್ವಹಿಸಿರುತ್ತಾರೆ.


Copyright © Sri Saptamathruka Chowdeshwari Temple 2015